For the best experience, open
https://m.bcsuddi.com
on your mobile browser.
Advertisement

ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ

09:11 AM Jun 24, 2024 IST | Bcsuddi
ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭ
Advertisement

ನವದೆಹಲಿ:18ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ(ಜೂ.24) ಆರಂಭವಾಗಲಿದೆ. ಜುಲೈ 3ರವರೆಗೆ ನಡೆಯಲಿರುವ ಅಧಿವೇಶನದ ಮೊದಲ ಎರಡು ದಿನಗಳಲ್ಲಿ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನೂತನ ಲೋಕಸಭಾ ಸ್ಪೀಕರ್ ಆಯ್ಕೆ ಬುಧವಾರ ನಡೆಯಲಿದ್ದು, ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನೀಟ್-ಯುಜಿ ಪತ್ರಿಕೆ ಸೋರಿಕೆ, ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಮುಂದೂಡಿಕೆ ವಿಚಾರದಲ್ಲಿಯೂ ಸರ್ಕಾರವನ್ನು ಮೂಲೆಗುಂಪು ಮಾಡಲು ಪ್ರತಿಪಕ್ಷಗಳು ತಂತ್ರ ರೂಪಿಸಿದ್ದು, ಮೊದಲ ದಿನವೇ ಗದ್ದಲ ನಡೆಯುವ ಸಾಧ್ಯತೆ ಇದೆ.

Advertisement

ಅಧಿವೇಶನದ ಮೊದಲ ದಿನ, ಏಳು ಬಾರಿ ಸಂಸದರಾಗಿದ್ದ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ಪ್ರತಿಪಕ್ಷಗಳು ನಿರ್ಧರಿಸಿವೆ. ಹಿರಿತನದ ಆಧಾರದಲ್ಲಿ ಸಂಸದ ಕೆ.ಸುರೇಶ್ ಈ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದು ಕಾಂಗ್ರೆಸ್ ಹೇಳುತ್ತಿದೆ.

ಆದರೆ, ಪ್ರಸಕ್ತ ಲೋಕಸಭೆಯಲ್ಲಿ ಸತತವಾಗಿ ಸತತವಾಗಿ ಸೋಲನುಭವಿಸದೆ ಸಂಸದರಾಗಿ ಸೇವೆ ಸಲ್ಲಿಸಿದ ವಿಚಾರದಲ್ಲಿ ಮಹತಾಬ್ ಹಿರಿಯರು ಎಂಬುದು ಸರ್ಕಾರದ ನಿಲುವು. ಸೋಮವಾರ ಸದನದ ಕಲಾಪ ಪ್ರಾರಂಭವಾಗುವ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಮುರ್ಮು ಅವರು ಮಹತಾಬ್ ಅವರಿಗೆ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಬೋಧಿಸಲಿದ್ದಾರೆ.

ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರು ಹೊಸದಾಗಿ ಆಯ್ಕೆಯಾದ ಸಂಸದರ ಪಟ್ಟಿಯನ್ನು ಮೊದಲು ಮಂಡಿಸಲಿದ್ದಾರೆ. ಮೊದಲ ದಿನದ ಅಧಿವೇಶನದಲ್ಲಿ ಮೋದಿ ಮತ್ತವರ ಸಂಪುಟ ಸದಸ್ಯರು ಸೇರಿದಂತೆ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಂಗಳವಾರ 264 ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ

Author Image

Advertisement