ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಚಿತ್ರದುರ್ಗ: ಚಿತ್ರದುರ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು ನೀಡುವ 12 ತಿಂಗಳ ಅಪ್ರೆಂಟಿಸ್ ತರಬೇತಿಗಾಗಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸಿರುವ ಹಾಗೂ ಕಂಪ್ಯೂಟರ್ ಜ್ಞಾನವಿರುವ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಪದವಿಯ ಎಲ್ಲ ವರ್ಷಗಳ ಅಂಕಪಟ್ಟಿಗಳು, ಸ್ನಾತ್ತಕೋತ್ತರ ಪದವಿಯ ಎಲ್ಲ ಅಂಕಪಟ್ಟಿಯೊಂದಿಗೆ ಅರ್ಜಿಸಲ್ಲಿಸಬೇಕು. ಅಂಕಪಟ್ಟಿಯನ್ನು ನಿರೀಕ್ಷಿಸಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ತರಬೇತಿಯ ಅವಧಿ ವೇಳೆ ಮಾಹೆಯಾನ 15,000/- ರೂ. ಗಳ ಸ್ಟೈಫೆಂಡ್ ನೀಡಲಾಗುವುದು. ತರಬೇತಿಯು 12 ತಿಂಗಳ ಅವಧಿಯದಾಗಿದ್ದು, ತಾತ್ಕಾಲಿಕವಾಗಿರುತ್ತದೆ. ತರಬೇತಿ ಮುಗಿದ ನಂತರ ಮುಂದುವರೆಸಲು ಅಥವಾ ಖಾಯಂಗೊಳಿಸಲು ಯಾವುದೇ ಅವಕಾಶ ಇರುವುದಿಲ್ಲ. ತರಬೇತಿಯ ಅವಧಿಯಲ್ಲಿ ತರಬೇತಾರ್ಥಿಗಳು ಬೇರೆ ಉದ್ಯೋಗ ಮಾಡುವಂತಿಲ್ಲ. ತರಬೇತಿಯ ಅವಧಿಯ ಮಧ್ಯದಲ್ಲಿ ಬಿಟ್ಟು ಹೋದರೆ, ಮೂಲ ದಾಖಲಾತಿಗಳನ್ನು ಅವಧಿಗೆ ಮುನ್ನ ಹಿಂದುರುಗಿಸುವುದಿಲ್ಲ.
ಅರ್ಜಿ ಸಲ್ಲಿಸಲು ಡಿಸೆಂಬರ್ 04 ಕೊನೆಯ ದಿನವಾಗಿದ್ದು, ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ತುಕಾರಾಂರಾವ್ ಬಿ.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.